Tuesday, May 24, 2011

ಮುಕ್ರುವಿನ ಮೊದಲ ಪರಿಚಯ.

ಮುಕ್ರು ನನ್ನ ಆತ್ಮೀಯ ಗೆಳೆಯ. ಬ್ರಹ್ಮ ಸ್ಪೆಶಲ್ ಕೇರ್‍ ತೆಗೆದುಕೊಂಡು ಸೃಷ್ಟಿಸಿದ ಏಕೈಕ ಮಾಸ್ಟರ್‍ ಸ್ಪೆಸಿಮನ್. ಈ ಬ್ಲಾಗ್ ಓದುತ್ತಿದ್ದಂತೆ ನನ್ನ ಗೆಳೆಯ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಡಬಡಾಯಿಸುತ್ತಾನೆ ಎಂದು ನನಗೆ ಗೊತ್ತು. ಆದರೆ ಕೇಸು ನನ್ನ ಪರವಾಗಿಯೇ ಅಗುತ್ತದೆ ಅಂತ ನನಗೆ ಗೊತ್ತು. ಯಾಕೆಂದರೆ ಮೊದಲನೆಯದಾಗಿ ಮುಕ್ರು ತನಗೆ ಮಾನ ಇದೆ ಅಂತ ನಿರೂಪಿಸಬೇಕು. ಎರಡನೆಯದಾಗಿ ಇಲ್ಲಿ ಹೇಳಲಾಗಿರುವ ಯಾವ ವಿಷಯವೂ ಸಹ ಕಲ್ಪಿತವಲ್ಲ. ಎಲ್ಲವೂ ನಡೆದ ಘಟನೆಗಳೇ! ಹಾಗಾಗಿ ಸತ್ಯ ಹೇಳುವುದು ಮಾನನಷ್ಟಕ್ಕೆ ದಾರಿಯಾದರೆ ಅದು ನನ್ನ ತಪ್ಪಲ್ಲ ಎಂದು ಕೋರ್ಟು ನಿರ್ಧರಿಸೀತು!
ಒಂದು ಕಥೆಯ ಮೂಲಕ ಶುರು ಮಾಡುತ್ತೇನೆ. ಒಂದು ಬಾವಿ. ಆ ಬಾವಿಯ ಮುಂದೆ ಇಬ್ಬರು ಸ್ನೇಹಿತರು. ಬಾವಿಯ ಆಳ ನೋಡುವ ತವಕ ಇಬ್ಬರಿಗೂ. ಒಬ್ಬ ಹೇಳಿದ "ನೀನು ಹಾರು ಮಗಾ.. ನಾನಿದ್ದೀನಿ. ಇಲ್ಲೇ ನೋಡು ಹಗ್ಗ ಇದೆ. ನೀನು ತೇಲುತ್ತಿದ್ದಂತೆ ಹಗ್ಗ ಎಸೆದು ನಿನ್ನ ಮೇಲೆ ಎಳಕೋತೀನಿ." ಗೆಳೆಯನ ಮಾತನ್ನು ನಂಬಿದ ಇನ್ನೊಬ್ಬ ಬಾವಿಗೆ ಹಾರಿಬಿಟ್ಟ. ಇವನು ಮೇಲೆ ನಿಂತು ಕೇಳುತ್ತಿದ್ದ. ನೆಲ ಸಿಕ್ತೇನೋ? ಎಷ್ಟು ಆಳ? ಹಾರಿದವನು ಆಳ ಹೇಳಿದ. ಮೇಲೆ ನಿಂತವ ಊರಿಗೆಲ್ಲ ಕೇಳುವಂತೆ ಬಾವಿಯ ಆಳ ನಾ ಕಂಡು ಹಿಡಿದೆ ಇಷ್ಟೈತೆ ಅಂತ ಊರಿಗೆಲ್ಲ ಕೂಗಿ ಹೇಳಿದ. ಅಷ್ಟರಲ್ಲಿ ಬಾವಿಯಲ್ಲಿ ಇದ್ದನಲ್ಲ ಅವನು ಹಗ್ಗ ಬಿಸಾಡು ಮಾರಾಯ ಮುಳುಗ್ತಾ ಇದ್ದೀನಿ ಅಂದ. ಮೇಲಿದ್ದವ ತಾಳು ಮಗಾ ಕಾಲು ಕಡೀತೈತೆ ಕೆರ್ಕೊತೀನಿ, ಆಮೇಲೆ ಅದು ಕೆರ್ಕೊತೀನಿ ಇದು ಕೆರ್ಕೋತೀನಿ ಅಂತ ಕಥೆ ಬಿಡತೊಡಗಿದ. ಬಾವಿಯಲ್ಲಿದ್ದವ ಲೋ ಮುಳುಗ್ತಾ ಇದ್ದೀನಿ ಸಾಯ್ತಾ ಇದ್ದೀನಿ ಹಗ್ಗ ಬಿಸಾಡೋ ಅಂತ ಗೋಗರೆದ. ತಡಿ ಮಗಾ ಕೈ ಬೆಚ್ಚಗಾಗಬೇಕು. ವ್ಯಾಯಾಮ ಮಾಡಬೇಕು ಅಂದ ಮೇಲಿದ್ದವ. "ಬೇಗ ಹಗ್ಗ ಹಾಕಲೋ ಹಲ್ಕಟ್ ಸಾಯ್ತಾ ಇದ್ದೀನಿ ಏನು ನಿನ್ನ ಗಾಂಚಾಲಿ.." ಎಂದ ಬಾವಿಯಲ್ಲಿ ಬಿದ್ದವನು. "ಛೀ..! ನನ್ನ ಬಗ್ಗೆ ಅಪಶಬ್ದ ನುಡಿದೆ. ನನಗೆ ಬೇಜಾರಾಯಿತು I am hurt" ಅಂತ ಹಗ್ಗದ ಸಮೇತ ಮೇಲಿದ್ದವ ಆಚೆ ಹೋಗಿಯೇ ಬಿಟ್ಟ. ಬಾವಿಯಲ್ಲಿದ್ದವನ ಬೊಬ್ಬೆ ಕೇಳಿ ಕೆಲ ಗೆಳೆಯರು ಬಂದು ಅವನನ್ನು ಹಾಗೋ ಹೀಗೋ ಮೇಲೆತ್ತಿದರೆನ್ನಿ.
ಈಗ ವಿಷಯಕ್ಕೆ ಬಂದೆ. ಬಾವಿಯ ಮೇಲೆ ನಿಂತಿದ್ದನಲ್ಲ ಅವನೇ ನನ್ನ ಗೆಳೆಯ ಮುಕ್ರು. ಬಾವಿಯಲ್ಲಿದ್ದವ ಬೇರಾರೂ ಅಲ್ಲ ಸಾಕ್ಷಾತ್ ನಾನೇ!
ಬಾವಿ ಶಿವರಾಮ ಕಾರಂತ ವೆಬ್ ಸೈಟ್. ಹಾಗೂ ಮೇಲೆತ್ತಿಕೊಂಡ ಗೆಳೆಯರು ರಾಘವೇಂದ್ರ ನಾವಡ, ಶ್ರೀಕಾಂತ ಕಲ್ಕೋಟಿ, ಪಿ.ಶೇಷಾದ್ರಿ ಮತ್ತಿತರರು.
ಇಂತಿರ್ಪ ಮುಕ್ರು ನನಗೆ ಸುಮಾರು ಎಂಟು ವರ್ಷದಿಂದ ಗೆಳೆಯ. ಮುಕ್ರುವಿಗೆ ಬಹುತೇಕ ಪ್ರಸಿದ್ದರೆಲ್ಲ ಗೊತ್ತು! ಮೇಕಪ್ ನಾಣಿ ಇವನ ರೂಮಿಗೆ ಬಂದು ಗೊಂಬೆಯಾಟ ತೋರಿಸಿದರಂತೆ, ಸಿ ಅಶ್ವತ್ ಕುಡಿದು ಟೈಟಾಗಿ ಇವನನ್ನು ಮನೆಗೆ ಎಳೆದುಕೊಂಡು ಹೋಗಿ ಹಾಡು ಕೇಳಿದ್ದ್ರಂತೆ, ಮೈಸೂರಿನ ಮಾಜಿ ಎಮ್ಮೆಲ್ಲೆ ಇವನಿಗಾಗಿ ಏನು ಮಾಡಲೂ ತಯಾರಂತೆ... ಹೀಗಂತೆಲ್ಲ ಹೇಳಿದ್ದ. ಇದನ್ನು ವಿವರವಾಗಿ ಹೇಳುತ್ತೇನೆ.
ಜೊತೆಗೆ ಆಶೀರ್ವಾದ ಟ್ರಾನ್ಸ್ಪೋರ್ಟ್ ಮಾಡುವ ಮೆಷಿನ್, ಸುತ್ತೂರು ಮಠದಲ್ಲಿ ರಾಜೀವ ದೀಕ್ಷಿತರಿಂದ ಮಂಗಳಾರತಿ ಪಡೆದದ್ದು, ಫೇಸ್ಬುಕ್ ಗೆಳೆಯರು, ಒಬ್ಬ ಗೆಳೆಯರನ್ನು ಹುಡುಕೊಂಡು ಹೋಗಿ ಬಲವಂತದ ಅತಿಧಿಯಾಗಿ ಉಸ್ಸೆನಿಸಿದ್ದು, ಲಡಾಕ್ ಪ್ರವಾಸ, ಹೋಟಲುಗಳಲ್ಲಿ ಬಿಟ್ಟಿ ಊಟ ಇತ್ಯಾದಿ ರೋಚಕ ಕಥೆಗಳಿವೆ. ಇಂಥವನೊಬ್ಬ ಭೂಮಿಯ ಮೇಲಿರುವನಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ.
ಮುಕ್ರುವಿನ ಕಥೆಯನ್ನು ಹೇಳುತ್ತೇನೆ..ಫಿಗರುಗಳನ್ನು ಅಲ್ಲಲ್ಲ ಸಾರಿ.. ಫಿಂಗರುಗಳನ್ನು ಕ್ರಾಸ್ ಮಾಡಿಟ್ಟುಕೊಂಡಿರಿ.

4 comments:

  1. Shuruvaayitaa dhaaLi? :) carry on.:)chennaagi hELiddeeri.

    ReplyDelete
  2. ಮುಕ್ರುವಿನ ಇನ್ನಷ್ಟು exploits ಗಳನ್ನು ಕೇಳುವ ಆತುರ... ಬೇಗ ಬೇಗ ಬರೆಯಿರಿ.. ನಿಮ್ಮಲ್ಲಿರುವ ಜಾಣ್ಮೆ, ಭಾಷೆಯ ಮೇಲಿನ ಪ್ರಭುತ್ವ, ವಿಷಯಗಳ ತಿಳಿವು ಹಾಗೂ Sense of humor ಗೆ ಶರಣು :)

    ReplyDelete
  3. ಮುಕ್ರುವಿನ ಸ್ಥೂಲ ಪರಿಚಯಕ್ಕೆ ಧನ್ಯವಾದಗಳು. ಅವನ ಭಯೋತ್ಪಾದಕರೊಂದಿಗಿನ ಸಲ್ಲಾಪ (ಸಂದರ್ಶನ), ಮೈಸೂರಿನ ಸಕಲ ರೋಗ ನಿವಾರಕ ಯಂತ್ರ, ಮುಂತಾದವು ತಪ್ಪಿ ಹೊಗಿರಬೇಕಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ರಸಿಕ ಶಿಖಾಮಣಿ ಮುಕ್ರುವಿನ ಸುದ್ದಿಯೇ ಅಲ್ಲಿಲ್ಲ. ಅವನ ರಾಸಲೀಲೆಯ ತುಣುಕುಗಳ ಸಂಗ್ರಹ ನನ್ನಲ್ಲಿವೆ. ಆಸಕ್ತರು ಮಿಂಚಂಚೆ ಮೂಲಕ ಪಡೆದುಕೊಳ್ಳಬಹುದು. ಸಧ್ಯದಲ್ಲೇ ಮುಕ್ರುವಿನ ವಿರಾಟ್ ರೂಪದ ದರ್ಶನವಾಗಲಿ ಎಂದು ಆಶಿಶುವ ---ಎಸ್ಕೆ

    ReplyDelete
  4. @JP: ನನ್ನಿ
    @ಅವಿನಾಶ್: ಖಂಡಿತ ಬರೆಯುತ್ತೇನೆ. ನಿರಾಶೆ ಮಾಡಲಾರೆ.
    @ಶಿವಶಂಕರ್‍: ನನ್ನಿ.
    @ಎಸ್ಕೆ:ಆಶೀರ್ವಾದ ಟ್ರಾನ್ಸ್ ಫರ್‍ ಮಾಡುವ ಮೆಶಿನು ಅದೇ ಅಲ್ಲವೇ? ಭಯೋತ್ಪಾದಕರ ಜೊತೆಗಿನ ಮಾತುಕತೆ ಪ್ರವಾಸ ಪರ್ವದಲ್ಲಿ ಬರುತ್ತದೆ.
    ಮುಕ್ರುವಿನ ವಿರಾಡ್ರೂಪ ಪ್ರದರ್ಶನಕ್ಕಾಗಿ ನಾನು ಪಡುತ್ತಿರುವ ಶ್ರಮಕ್ಕೆ ಹೆಗಲು ಕೊಡಲು ಅನೇಕ ಗೆಳೆಯರು ಮುಂದೆ ಬಂದಿದ್ದಾರೆ. ತಮ್ಮ ಸಹಕಾರವೂ ಅಗತ್ಯ.
    ಶ್ರೀಹರ್ಷ

    ReplyDelete