Monday, May 30, 2011

ರಾಜೀವ್ ದೀಕ್ಷಿತರಿಂದ ಮಂಗಳಾರತಿ...

ಮೈಸೂರಿನ ಜೆ ಎಸ್ ಎಸ್ ಮಠದಲ್ಲಿ ರಾಜೀವ ದೀಕ್ಷಿತರ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಸಂಜೆಯ ಸಮಯ. ಸುಮಾರು ಮೂರು ತಾಸುಗಳ ಕಾಲ ರಾಜೀವ ದೀಕ್ಷಿತರು ದೇಶದ ಎಕಾನಮಿ, ಭಯೋತ್ಪಾದನೆ, ಸ್ವದೇಶಿ ಇತ್ಯಾದಿಗಳ ಬಗ್ಗೆ ಉಪನ್ಯಾಸ ನೀಡಿದರು. ಭಾಷಣ ಕೇಳುತ್ತಿದ್ದ ಮುದಿ ಅವಿವೇಕಿಯೊಬ್ಬ ಕೊನೆಗೆ "ಇದನ್ನೆಲ್ಲ ನಮಗೆ ಏಕೆ ಹೇಳುತ್ತಿದ್ದೀರಿ?" ಅಂತ ಕೇಳಿಬಿಟ್ಟ. ಆತ ಸುತ್ತೂರು ಸ್ವಾಮಿಗಳ ಪೂರ್ವಾಶ್ರಮದ ಸಹೋದರನಂತೆ. ಇದನ್ನು ಕೇಳಿ ನಮಗಷ್ಟೇ ಅಲ್ಲ, ರಾಜೀವ ದೀಕ್ಷಿತರಿಗೂ ಅಡಿಯಿಂದ ಮುಡಿಯವರೆಗೆ ಉರಿದು ಹೋಯಿತು! ಕೋಪಗೊಂಡು ಊಟವನ್ನೂ ಸಹ ಮಾಡದೇ ದೀಕ್ಷಿತರು ಅಲ್ಲಿಂದ ಹೊರಟರು. ನಮ್ಮ ಮುಕ್ರು ಮಹಾಶಯನೂ ಸಹ ನಮ್ಮೊಂದಿಗಿದ್ದ. ಸರಿಯಾಗಿ ಭಾಷಣ ಮುಗಿಯುವ ಹೊತ್ತಿಗೆ ಕನ್ನಡಪ್ರಭದ ಯಾವುದೋ ಲೇಖನವೊಂದನ್ನು ಜೆರಾಕ್ಸ್ ಮಾಡಿಸಿಕೊಳ್ಳಲು ತೆರಳಿದ. ರಾಜೀವ ದೀಕ್ಷಿತರು ಕಾರಿನಲ್ಲಿ ಕುಳಿತು ನಮ್ಮ ಮೇಲೆಲ್ಲ ಕೂಗಾಡತೊಡಗಿದರು. ನಾನು ತಕ್ಷಣವೇ ಇಳಿದು ಗೆಳೆಯನನ್ನು ಕರೆತರಲು ಓಡಿದೆ. ದೀಕ್ಷಿತರ ಸಿಟ್ಟು ಎಂತಹದು ಅಂತ ನನಗೆ ಗೊತ್ತು. ಬೈಯುವಾಗ ಅವರ ವಾಗ್ಬಾಣಗಳು ಅತ್ಯಂತ ತೀಕ್ಷ್ಣವಾಗಿರುತ್ತವೆ. ಅವನ್ನು ಕೇಳುವಾಗ ಬದುಕುವದಕ್ಕಿಂತ ಸಾವೇ ಮೇಲೆನಿಸಿಬಿಡುತ್ತದೆ. ಅದಕ್ಕೆ ಇವನು ಬಲಿಯಾದರೆ ತಡೆದುಕೊಳ್ಳಲು ಇವನಿಂದಾಗದು ಎಂದು ಇವನನ್ನು ಕರೆತರಲು ಓಡಿದೆ. ನಾನು ಬಂದು ಅದೆಷ್ಟು ಕರೆದರೂ ಮುಕ್ರು ಮಹಾಶಯ ಹೊರಡುವ ಮನಸು ಮಾಡುತ್ತಿಲ್ಲ. ಕಡೆಗೆ ರಾಜೀವ ದೀಕ್ಷಿತರೇ ಇಳಿದು ಬಂದರು. ಅಲ್ಲೂ ರಾಜೀವ ದೀಕ್ಷಿತರಿಗೆ ಕಾಯಿಸತೊಡಗಿದ. ಇದು ಅವರಿಗೆ ಮತ್ತಷ್ಟು ರೇಗಿತು. "ಪೇಪರ್‍ ಜೆರಾಕ್ಸ್ ಎಂತದು? ಇದು ಹೊರಗೆ ಸಿಗುವುದಿಲ್ಲವೇ? ನಾಳೆ ಮಾಡಿಸಿದರಾಗದೇ?" ಅಂತೆಲ್ಲ ಕೇಳಿದರು. ಈ ಪುಣ್ಯಾತ್ಮ ನಾನು ಎಷ್ಟು ಹೇಳಿದರೂ ಕೇಳದೇ "ಇದು ಸಿಗುವುದಿಲ್ಲ, ನಾಳೆ ಹಳೆಯದಾಗಿರುತ್ತದೆ" ಇತ್ಯಾದಿ ಸಬೂಬು ಕೊಡತೊಡಗಿದ. ದೀಕ್ಷಿತರ ಮುಖ ಕೆಂಪಗಾಗತೊಡಗಿತು. ಅಷ್ಟರಲ್ಲಿ ಮಠದ ಹುಡುಗ ಜೆರಾಕ್ಷ್ ಆದ ಪ್ರತಿಯನ್ನು ತಂದು ಕೊಟ್ಟ. ಕಡೆಗೆ ಅಂತೂ ಹೊರಟು ನಿಂತ ಮುಕ್ರುನನ್ನು ಕುರಿತು ರಾಜೀವ ದೀಕ್ಷಿತರು "ಯೇ ಛೋಟೇ ಛೋಟೇ ಕಾಮ್ ಕರನಾ ಬಂದ ಕರೋ.. ಕಭೀ ಆಗೇ ಆವೋಗೆ!" (ಇಂತಹ ಚಿಲ್ಲರೆ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸು (ಜೀವನದಲ್ಲಿ) ಯಾವಾಗಲಾದರೂ ಮುಂದೆ ಬರುತ್ತೀಯಾ) ಎಂದು ಬುದ್ದಿ ಹೇಳಿದರು. ಮುಕ್ರುವಿಗೆ ಬಹುತೇಕ ಸಮಯಗಳಲ್ಲಿ ಸಮಯ ಸಂದರ್ಭಗಳ ಅರಿವು ಇರುವುದಿಲ್ಲ. ಅಮೇಜಾನ್ ಕಾಡಿನ ಆದಿವಾಸಿಗಳ ಹಾಗೆ! ಹ್ಹೆ..ಹ್ಹೆ ಹ್ಹೆ.. ಎನ್ನುತ್ತಾ ಕಾಯುವ ಹೊತ್ತನ್ನು ಎಳೆದು ಬಿಡುತ್ತಾನೆ.
ಮಾಲಿನಿ ಮಲ್ಯರ ಮನೆಯಲ್ಲಿ ಚಂದ್ರಿಕಾ ಎಂಬ ಮಗು ಇದೆ. ಮುದ್ದಾದ ಎಲ್ಲರಿಗೂ ಮೆಚ್ಚಾದ ಹುಡುಗಿ. ಆ ಮಗುವಿನೊಂದಿಗೆ ಆಡುತ್ತ ಸ್ವಲ್ಪ ಸಮಯ ಕಳೆದೆವು. ಸಂಜೆಯಾಗುತ್ತಿದ್ದಂತೆ ನಾವು ಉಡುಪಿಗೆ ತೆರಳಿ ಬಸ್ ಹಿಡಿಯಬೇಕಿತ್ತು. ಈ ಪುಣ್ಯಾತ್ಮನಿಗೆ ಹೊರಡಪ್ಪಾ ಅಂತ ಹೇಳಿದರೆ ನನಗೆ ಮಗುವನ್ನು ಬಿಟ್ಟು ಹೊರಡಲು ಮನಸಾಗುತ್ತಿಲ್ಲ ಅಂತ ಹೇಳುತ್ತಾ ಮತ್ತೆ ಅರ್ಧ ಘಂಟೆ ಸಮಯ ಕಳೆದ. ನಾನು ಕಡೆಗೆ ಕಾಯಲಾರದೇ. ಬ್ಯಾಗ್ ಎತ್ತಿಕೊಂಡು ಮಾಲಿನಿ ಮಲ್ಯರಿಂದ ಬೀಳ್ಕೊಟ್ಟು ಹೊರಟೆ. ಮತ್ತೆ ನನ್ನನ್ನು ತಡೆದು ಕಾಲು ಗಂಟೆ ಯ ಮಟ್ಟಿಗೆ ಮಾಲಿನಿ ಮಲ್ಯರಿಗೆ ವಿದಾಯ ಹೇಳಿ ಕಡೆಗೂ ಹೊರಟ ನನ್ನ ಬಸ್ ಚಾರ್ಜಿನಲ್ಲಿ!
ಹಂಪಿಯಲ್ಲಿ ಬೀಡಿ ಸೇದುತ್ತಿದ್ದ ಪೋಂಗಾ ಪಂಡಿತನೊಡನೆ ಹರಟೆ ಹೊಡೆಯುತ್ತಾ ನಿಂತುಬಿಟ್ಟ! ಅವನು ತನ್ನ ಹತ್ತು ಹೆಂಡಿರನ್ನಾಳುವ ಕೆಪ್ಯಾಸಿಟಿಯ ಬಗ್ಗೆ ಕೊಚ್ಚಿಕೊಳ್ಲುತ್ತಿದ್ದರೆ ಈತ ಬುದ್ಧನ ಬಗ್ಗೆ ಬೋಧನೆ ಮಾಡತೊಡಗಿದೆ. ಇಬ್ಬರಲ್ಲು ಲೈಂಗಿಕ ಮತ್ತು ಕೌಂಟರ್‍ ಅಧ್ಯಾತ್ಮಿಕ ಸಂವಾದ ಏರುತ್ತಲೇ ಹೋಯಿತು. ಜೊತೆಗೆ ನನ್ನ ಅಪ್ಪ ಬೇರೆ ಇದ್ದರು. ಅವರೂ ಕಡೆಗೆ ನೀನು ಹೀಗೆಲ್ಲ ಅಯೋಗ್ಯರೊಡನೆ ಮಾತಿಗೆ ಕೂರಬಾರದು ಅಂತ ಬುದ್ಧಿ ಹೇಳಬೇಕಾಯಿತು.
ಇರಲಿ ವಾಪಸು ಬರುತ್ತೇನೆ. ರಾಜೀವ ದೀಕ್ಷಿತರೊಡನೆ ವಿಶ್ವ ಗೋ ಸಮ್ಮೇಳನಕ್ಕಾಗಿ ಶಿವಮೊಗ್ಗೆಗೆ ಹೊರಟಾಗ ನಡುವೆ ಸುಭಾಷನ ಬಗ್ಗೆ ದೀಕ್ಷಿತರ ಕಿವಿ ಚುಚ್ಚತೊಡಗಿದ. ಸುಭಾಷ್ ಅನುವಾದಿಸಿದ ಸ್ವದೇಶಿ ಚಿಕಿತ್ಸೆ ಮತ್ತು ಗೋಚಿಕಿತ್ಸೆ ಹೊತ್ತಗೆಗಳು ಸರಿಯಾಗಿಲ್ಲ. ಅನೇಕರು ಭಾಷೆ ಅರ್ಥವಾಗದೇ ಒದ್ದಾಡುತ್ತಿದ್ದಾರೆ. ಅದರಲ್ಲಿ ಸಾಕಷ್ಟು ತಪ್ಪುಗಳಿವೆ ಅಂತ ಕಂಪ್ಲೇಂಟು ಬಂದಿದೆ ಅಂತೆಲ್ಲ. ನಾವು ರಾಜೀವ ದೀಕ್ಷಿತರ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದೆವೋ? ಒಂದೋ ಸುಭಾಷ್ಗೆ ಫೋನ್ ಮಾಡಿ ಉಗಿಯುತ್ತಿದ್ದವು ಅಥವಾ ನೀನು ಸುಭಾಷ್ ಬಗ್ಗೆ ಹೇಳಬೇಕಾಗಿಲ್ಲ ಅಂತ ಮುಕ್ರುವನ್ನೇ ಬೈಯುತ್ತಿದ್ದೆವು! ಆದರೆ ದೀಕ್ಷಿತರು ಹೇಳಿದ್ದು " ಹಾಗಿದ್ದರೆ ಒಂದು ಕೆಲಸ ಮಾಡು. ನೀನೇ ಹೊಸದಾಗಿ ಬರೆದುಬಿಡು. ಅವನದನ್ನು ತೆಗೆದು ನಿನ್ನ ಪುಸ್ತಕವನ್ನೆ ಮಾರುಕಟ್ಟೆಗೆ ಬಿಡೋಣ" ಎಂದುಬಿಟ್ಟರು.
ಒಂದು ಏಟಿಗೆ ಎರಡು ಹಕ್ಕಿ ಹೊಡೆದಿದ್ದರು ದೀಕ್ಷಿತರು. ಸ್ವತಃ ಕೆಲಸ ಮಾಡದೇ ಇನ್ನೊಬ್ಬರನ್ನು ಬೈಯುವುದು ಸುಲಭ; ಕೆಲಸ ಮಾಡಿ ತೋರಿಸಿ ಮಾತನಾಡು ಅನ್ನು ಸೂಕ್ಷ್ಮವಾದ ಸಂದೇಶವನ್ನು ಕೊಟ್ಟಿದ್ದರೆ ಇನ್ನೊಂದು ಕಡೆ ಕೆಲಸ ಮಾಡಿದವರಿಗೆ ಗೌರವ ಹೇಗೆ ಕೊಡಬೇಕೆಂದು ಹೇಳಿಕೊಟ್ಟಿದ್ದರು. ಆ ಕ್ಷಣಕ್ಕೆ ಆಯಿತು ಬರೆಯುತ್ತೇನೆ ಎಂದು ಒಪ್ಪಿಕೊಂಡ ಮುಕ್ರು ಇನ್ನೂ ಆ ಹೊತ್ತಗೆ ಬರೆದಿಲ್ಲ! ಆತ ಬರೆಯಲಾರ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ! ಯಾಕೆಂದರೆ ಸುಭಾಷ್ ಆ ಹೊತ್ತಗೆಯನ್ನು ಕನ್ನಡಕ್ಕೆ ತರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೈಸೂರಿನ ಆಯುರ್ವೇದ ಕಾಲೆಜಿನ ಲೈಬ್ರರಿಯನ್ನೆಲ್ಲ ತಡಕಾಡಿ ಅದೆಷ್ಟೋ ಹೊತ್ತಗೆಗಳನ್ನು ಪರಾಮರ್ಶಿಸಿ ಹಗಲು ರಾತ್ರಿ ಊಟ ನಿದ್ದೆಯಿಲ್ಲದೇ ಬರೆದದ್ದು. ಅತ್ಯಂತ ಉನ್ನತ ಹಿಂದಿ ಭಾಷೆಯ ಆ ಹೊತ್ತಗೆಯನ್ನು ಅನುವಾದಿಸಲು ಹಿಂದಿ ಪಂಡಿತರುಗಳೆ ಹಿಂದೇಟು ಹಾಕಿದ್ದರು!
ಇನ್ನೊಂದು ಋಷಿ ಕೃಷಿ ಎಂಬ ಹೊತ್ತಗೆಯನ್ನು ಅನುವಾದಿಸುತ್ತಿದ್ದೇನೆ ಅಂತ ಆರು ವರ್ಷಗಳ ಹಿಂದೆ ಮುಕ್ರು ಹೇಳಿಕೊಂಡಿದ್ದ. ಅದು ಡಾ.ದೇಶಪಾಂಡೆ ಎಂಬ ಕೃಷಿ ವಿಜ್ಞಾನಿಯೊಬ್ಬರು ಬರೆದದ್ದು. ನಾನು ಅದರ ಅನುವಾದಕ್ಕೆ ಅನುಮತಿ ಕೇಳಿದಾಗ ಕೊಡಲು ನಿರಾಕರಿಸಿದ್ದರು. ಆದರೆ ಮುಕ್ರುವಿಗೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್‍ ರವರ ಇನ್ ಪ್ಲ್ಯುಯೆನ್ಸ್ ನಿಂದಾಗಿ ಇದರ ಅನುವಾದದ ಅನುಮತಿ ದೊರೆತಿತ್ತು. ಆಗಲೇ ಇನ್ನಾರು ತಿಂಗಳಲ್ಲಿ ಮುಗಿಯಬೇಕಿದ್ದ ಅನುವಾದದ ಕೆಲಸ ಆರು ವರ್ಷಗಳ ನಂತರ ಈಗಲೂ ಇನ್ನಾರು ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ!

1 comment:

  1. Free Online Classified | Post Ad | US Classifieds - mukru.com usa no. 1 largest marketplace to buy, sell, find used product, servicees in your local area.
    http://www.mukru.com

    ReplyDelete